ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಜನಪದಗೀತೆ -
ಅನಕ್ಷರಸ್ಥ ಜನಸಮೂಹದ ನಡುವೆ ವಾಕ್‍ಸಂಪ್ರದಾಯದ ಮೂಲಕ ಹರಿದುಬಂದಿರುವ ಒಂದು ಗುಂಪಿನ ಕಾವ್ಯ ಮತ್ತು ಸಂಗೀತಗಳ ಸಮಾವೇಶದಿಂದಾದುದು ಜನಪದ ಗೀತೆ. ಈ ಗುಂಪು ಪ್ರಧಾನವಾಗಿ ಗ್ರಾಮೀಣ ಸಮುದಾಯವಾಗಿದ್ದು, ಪ್ರಾಚೀನ ಸಂಸ್ಕøತಿಯೊಂದನ್ನು ಉಳಿಸಿಕೊಂಡು ಬಂದುದಾಗಿರುತ್ತದೆ. ಆದ್ದರಿಂದ ಜನಪದ ಗೀತೆ ನಾಗರಿಕ ಮನಸ್ಸಿನ ಅಭಿವ್ಯಕ್ತಿಯಲ್ಲ. ಗ್ರಾಮೀಣರ ಸುಖದುಃಖಗಳನ್ನು, ಸಮಸ್ಯೆ ಕ್ಲೇಶಗಳನ್ನು ಹೇಳುವಂಥದು. ಇಲ್ಲಿನ ಮನೋಭಾವ ತೀವ್ರ ಮಾನವೀಯ, ರಾಗ ಮತ್ತು ಪದರಚನೆಯ ಸುಮಧರ ಬಂಧವೇ ಇದರ ಲಕ್ಷಣ. ಸರಳತೆ ಮತ್ತು ಸ್ಪಷ್ಟತೆ ಇದರ ಮತ್ತೆರಡು ಲಕ್ಷಣಗಳು. ಜನಪದ ಗೀತೆಯಲ್ಲಿ ಅಭಿಜಾತ ಕಲೆಯ ತಾಂತ್ರಿಕ ಸೂಕ್ಷ್ಮತೆ ಇರದಿದ್ದರೂ ಅದರಂತೆಯೇ ಇದೂ ಉನ್ನತ ಸ್ಥಾನವನ್ನು ಗಳಿಸಿಕೊಳ್ಳಬಲ್ಲುದು.
ಜನಪದ ಗೀತೆ ಯಾವುದನ್ನೆ ವಿವರಿಸಲಿ ಅದನ್ನು ನೇರವಾಗಿ ಹೇಳುತ್ತದೆ. ಅದನ್ನು ಪ್ರಯತ್ನಪೂರ್ವಕವಾಗಿ ಕಲಾತ್ಮಕಗೊಳಿಸುವುದಾಗಲಿ ಅಥವಾ ಕಾವ್ಯದ ಪರಿಣಾಮಗಳನ್ನು ತರಬೇಕೆಂಬುದಾಗಲಿ ಅದರ ಉದ್ದೇಶವಲ್ಲ. ಆದ್ದರಿಂದ ಜನಪದ ಗೀತೆಯ ಶುದ್ಧ ಸಾಹಿತ್ಯಿಕ ಪರಿಶೀಲನೆ ಲಾಭದಾಯಕವಾಗುವುದಿಲ್ಲ. ಇಲ್ಲಿ ಸಾಹಿತ್ಯಿಕ ಮೌಲ್ಯಕ್ಕಿಂತ ಹೆಚ್ಚಾಗಿ ಸಾಮಾಜಿಕ ಚಾರಿತ್ರಿಕ ಹಾಗೂ ಮನಶ್ಯಾಸ್ತ್ರೀಯ ಮೌಲ್ಯಗಳೇ ನಮ್ಮ ಗಮನವನ್ನು ಸೆಳೆಯುವಂಥವು. ಇದರಿಂದ ಜನಪದ ಮನೋಭಾವಗಳನ್ನು ನಿರ್ಧರಿಸಲು ಸಾಧ್ಯವಾಗುತ್ತದೆ.

ಜನಪದ ಗೀತೆ ಸಾಹಿತ್ಯ ಪ್ರಮುಖವಾಗಿ ಗೀತೆ ಮತ್ತು ಲಾವಣಿಗಳೆಂದು ಎರಡು ಬಗೆಯಾಗುತ್ತದೆ. ಮೊದಲನೆಯದು ಭಾವಗೀತಾತ್ಮಕವಾದರೆ, ಎರಡನೆಯದು ಕಥಾತ್ಮಕವಾಗುತ್ತದೆ. ಒಂದು ಭಾವನಿಷ್ಠವಾದರೆ, ಮತ್ತೊಂದು ವಸ್ತುನಿಷ್ಠ. ಎರಡೂ ಹಾಡಲ್ಪಡುವಂಥವು. ಎರಡರ ರಚನಕಾರರೂ ಇಂದು ಅನಾಮಧೇಯರಾದರೂ ಎರಡನೆಯದರ ರಚನಕಾರ ಹೆಚ್ಚು ಸುಶಿಕ್ಷಿತ ಕಲಾವಂತನೆಂದು ಅಭಿಪ್ರಾಯ. ಮೊದಲನೆಯ ರಚನೆ ಎರಡನೆಯದಕ್ಕಿಂತ ಪುರಾತನವಾದುದೆಂದು ಹೇಳುತ್ತಾರೆ. ಮೊದಲ ಗುಂಪಿನ ಗೀತೆಗಳ ಬದುಕಿನ ಚಟುವಟಿಕೆಗಳೊಡನೆ ಹೆಚ್ಚು ಸಂಬಂಧಪಡುವುದರಿಂದ ಇವನ್ನು ಕ್ರಿಯಾತ್ಮಕ ಗೀತೆಗಳೆಂದು ಕರೆಯಬಹುದಾಗಿದೆ. ಆದರೆ ಎರಡನೆ ಗುಂಪಿನ ಗೀತೆಗಳು ಈ ಬಗೆಯ ಯಾವುದೇ ಸಾಂಪ್ರದಾಯಿಕ ಸಂದರ್ಭಗಳನ್ನು ಹೆಚ್ಚಾಗಿ ಅಪೇಕ್ಷಿಸುವುದಿಲ್ಲ. ಇಷ್ಟಾದರೂ ಕ್ರಿಯಾತ್ಮಕಗೀತೆಯೊಂದು ಅದೇ ಕಾಲದಲ್ಲಿ ಸೌಂದರ್ಯಬೋಧೆಯನ್ನುಂಟುಮಾಡಬಾರದೆಂದೇನೂ ನಿಯಮವಿಲ್ಲ.

ಸಾಮಾನ್ಯವಾಗಿ ಜನಪದ ಗೀತೆಗಳನ್ನು ರಚಿಸುವುದಕ್ಕೆ ಮತ್ತು ಹಾಡುವುದಕ್ಕೆ ಸಂಬಂಧಿಸಿದಂತೆ ಯಾವುದೇ ಔಪಚಾರಿಕ ಬೋಧನತಂತ್ರವೊಂದು ಇರುವುದಿಲ್ಲ. ಅವು ಕಿವಿಯ ಮೂಲಕ ಕಲಿತುಕೊಂಡವು ಮತ್ತು ಹಾಗೆಯೇ ತಲೆಮಾರಿನಿಂದ ತಲೆಮಾರಿಗೆ ಸಾಗಿದವು. ಇವುಗಳ ರೂಪ ಅಥವಾ ರಚನೆಯನ್ನು ಕುರಿತಾದ ಯಾವುದೇ ಬುದ್ಧಿಪೂರ್ವಕ ಅರಿವು ಜನಪದ ಗಾಯಕರಿಗೆ ಇರುವುದಿಲ್ಲ. ಅವರ ಮನಸ್ಸಿನಲ್ಲಿ ಯಾವುದೇ ಸೌಂದರ್ಯಾತ್ಮಕ ಅಥವಾ ವಿಶ್ಲೇಷಕ ಸಿದ್ಧಾಂತವೂ ಇರುವುದಿಲ್ಲ. ತಾಂತ್ರಿಕವಾಗಿ ಶಿಷ್ಟವಾಗಿ ಹೋಗಿರುವ ನಮ್ಮ ಸಂಗೀತದ ಅನುಷ್ಠಾನದ ಕಲಿಕೆ ಹಾಗೂ ಪೂರ್ವಾಭ್ಯಾಸಗಳ ಲಕ್ಷಣಗಳಾವುವೂ ಇಲ್ಲಿ ಕಂಡುಬರುವುದಿಲ್ಲ.

ಜನಪದ ಗೀತೆ ಗುಂಪೊಂದರ ಸಾಮಾನ್ಯ ಸದಸ್ಯರೂ ಭಾಗವಹಿಸಬಹುದಾದ ಒಂದು ಕಲೆ. ಆದರೆ ಇದು ಶಿಷ್ಟಸಂಗೀತ ಅಥವಾ ಸಾಹಿತ್ಯದಲ್ಲಿ ಅಷ್ಟಾಗಿ ಸಾಧ್ಯವಿರುವುದಿಲ್ಲ. ಹತ್ತಿರ ಹತ್ತಿರ ಹೇಳುವುದಾದರೆ, ಜನಪದ ಸಮೂಹದ ಪ್ರತಿಯೊಬ್ಬನೂ ಗೀತೆಗಳನ್ನು ಬಲ್ಲವನಾಗಿರುತ್ತಾನೆ ಮತ್ತು ಅವನ್ನು ಹಾಡುವವನಾಗಿರುತ್ತಾನೆ. ಅಥವಾ ಕಡೆಯಪಕ್ಷ ಅವನ್ನು ಆಲಿಸಿರುತ್ತಾನೆ ಮತ್ತು ಅವನ್ನು ಕುರಿತು ಬಹಳವಾಗಿ ತಿಳಿದಿರುತ್ತಾನೆ. ಅನೇಕ ಸಂದರ್ಭಗಳಲ್ಲಿ ಹಾಡುವ ಒಂದು ಗುಂಪೇ ಇದ್ದು, ಅಷ್ಟು ಪ್ರಮುಖರಲ್ಲದ ಹಾಡುಗಾರರೂ ಭಾಗವಹಿಸಲು ಅವಕಾಶಗಳಿರುತ್ತವೆ. ಆದರೆ ಒಬ್ಬ ಹಾಡುಗಾರನನ್ನು ಅವನ ಗುಂಪಿನ ಅತ್ಯಂತ ಪ್ರಮುಖ ಹಾಡುಗಾರನನ್ನಾಗಿ ಮಾಡುವುದಾದರೂ ಯಾವುದು ಎಂಬ ಪ್ರಶ್ನೆ ಸಹಜವಾಗಿ ಏಳುತ್ತದೆ. ಅದಕ್ಕೆ ಉತ್ತರವಿಷ್ಟೆ : ಉತ್ತಮ ಕಂಠಶ್ರೀ ಅನೇಕ ವೇಳೆ ಗ್ರಾಹ್ಯ ವಿಷಯವಾದರೂ ಅವಶ್ಯವಾದುದೇನಲ್ಲ ; ಉತ್ತಮ ಜ್ಞಾಪಕಶಕ್ತಿ ಇದ್ದರೆ ಸಾಕು. ಆದ್ದರಿಂದ ಗಾಯಕರ ಅಸಾಧ್ಯ ನೆನಪಿನ ಶಕ್ತಿಯನ್ನು ಕಂಡು ಸೂತ್ರವೊಂದನ್ನು ರೂಪಿಸಬಹುದು : 'ಅವನು ಇರುಳೆಲ್ಲ ಹಾಡುತ್ತಾನೆ, ಆದರೆ ಪುನರಾವರ್ತಿಸುವುದಿಲ್ಲ.' ಅಮೆರಿದ ಸಂಯುಕ್ತಸಂಸ್ಥಾನಗಳಲ್ಲಿ ಹಾಡುಗಾರನೊಬ್ಬನನ್ನು ಹೀಗೆ ಸ್ತುತಿಸಿದ್ದಾರೆ. ಈ ಮಾತನ್ನು ಜಗತ್ತಿನ ಎಲ್ಲ ಗಾಯಕರಿಗೂ ಕಲಾವಿದರಿಗೂ ಅನ್ವಯಿಸಬಹುದು.

ಶಿಷ್ಟಕಲೆಯಲ್ಲಿ ಕಲಾವಿದ, ವಿಮರ್ಶಕ ಹಾಗೂ ಸಾಮಾನ್ಯರ ನಡುವೆ ಭಿನ್ನತೆ ಇರುತ್ತದೆ. ಕಾವ್ಯದಲ್ಲಿ ಕವಿ, ಗಮಕಿ (ಕೆಲವೊಮ್ಮೆ) ಮತ್ತು ಸಹೃದಯ ಇರುತ್ತಾರೆ. ಸಂಗೀತದಲ್ಲಿ ರಚನಕಾರ, ಸಂಗೀತಗಾರ ಮತ್ತು ಶ್ರಾವಕ ಇರುತ್ತಾರೆ. ಆದರೆ ಜನಪದ ಗೀತೆಗಳಲ್ಲಿ ಈ ಮಟ್ಟಗಳಲ್ಲಿ ಹೆಚ್ಚು ವ್ಯತ್ಯಾಸವೇನೂ ಕಂಡುಬರುವುದಿಲ್ಲ. ಇವುಗಳಲ್ಲಿ ಹಾಡುಗಾರನಿಗೂ ಶ್ರೋತೃವಿಗೂ ಇರುವ ಅಂತರ ಸೂಕ್ಷ್ಮವಾದುದು. ಹಾಡುಗಾರ ಒಬ್ಬನೇ ಆಗಿರಬಹುದು ಅಥವಾ ಒಂದು ಗುಂಪು ಆಗಿರಬಹುದು. ಹಾಗೆಯೇ ಸೃಷ್ಟಿಕರ್ತ ಮತ್ತು ಹಾಡುಗಾರನಿಗಿರುವ ವ್ಯತ್ಯಾಸವೂ ತುಂಬ ಸೂಕ್ಷ್ಮವಾದುದು. ಸಾಮಾನ್ಯವಾಗಿ, ಜನಪದ ಗೀತೆಯೊಂದರ ಮೂಲ ರಚನಕಾರ ನಮಗಿಂದು ಗೊತ್ತಿಲ್ಲ. ಈ ಕಲೆ ಪ್ರತಿ ತಲೆಮಾರಿನಲ್ಲಿಯೂ ಹೊಸ ಸೃಷ್ಟಿಗಳನ್ನು ಅವಲಂಬಿಸಿರುವುದು ಅಪರೂಪ. ಹೊಸದಾಗಿ ಸೃಷ್ಟಿಯಾಗುವ ಗೀತೆಗಳ ಸಂಖ್ಯೆ ಯಾವಾಗಲೂ ಕಡಿಮೆಯೇ. ಜನಪದ ಗೀತೆ ಶಿಷ್ಟಕಾವ್ಯದ ಹಾಗೆ ಸೃಷ್ಟಿಯಾಗುವುದಿಲ್ಲ. ಶಿಷ್ಟಕಾವ್ಯದಲ್ಲಿ ಒಂದು ಸ್ವೋಪಜ್ಞತೆ ಇರುತ್ತದೆ. ಆದರೆ ಜನಪದ ಗೀತೆ ಈಗಾಗಲೇ ಅಸ್ತಿತ್ವದಲ್ಲಿರುವ ಮೂಲವಸ್ತುವಿನ ಪುನರ್ ಸೃಷ್ಟಿಕ್ರಿಯೆಯ ಮೂಲಕ ಬೆಳೆಯುತ್ತದೆ. ಇದನ್ನೆ ವಿದ್ವಾಂಸರು ಸಾಮುದಾಯಿಕ ಪುನರ್‍ಸೃಷ್ಟಿ ಎಂದು ಕರೆಯುವುದು. ಇದರಲ್ಲಿಯೂ ಇಡೀ ಸಮಾಜವೇ ಭಾಗವಹಿಸುತ್ತದೆ ಎಂದಲ್ಲ, ಆ ಸಮಾಜದ ಒಳಗೆಯೇ ಇರುವ ಮತ್ತು ಈ ಕ್ರಿಯೆಯಲ್ಲಿ ಕ್ರಿಯಾಶೀಲರಾಗಿರುವ ವ್ಯಕ್ತಿಗಳಿಂದ ಮಾತ್ರ ಇದು ಸಾಧ್ಯವಾಗುತ್ತದೆ. ಗಾಯಕರು ತಮ್ಮ ಎಷ್ಟೋ ಮಾರ್ಪಾಡುಗಳನ್ನು ಗೊತ್ತಿದ್ದೊ ಗೊತ್ತಿಲ್ಲದೆಯೊ ಸೇರಿಸುವರು, ಈ ವ್ಯತ್ಯಾಸಗಳೇ ಕ್ರಮೇಣ ಭಿನ್ನ ಪಾಠಾಂತರ, ರೂಪಾಂತರಗಳಾಗಿ, ಪ್ರಾದೇಶಿಕ ವ್ಯತ್ಯಯಗಳಾಗಿ ಗೀತಸಂಪ್ರದಾಯಗಳಾಗಿ ಬೆಳೆಯುವುದಕ್ಕೆ ಮತ್ತು ಹೊಸಪಠ್ಯ ಮಟ್ಟುಗಳಾಗಿ ಬೇರ್ಪಡುವುದಕ್ಕೆ ಕಾರಣವಾಗುತ್ತದೆ. ಈ ಸೃಷ್ಟಿಕ್ರಿಯೆ ಒಬ್ಬನಿಂದ ಪ್ರಾರಂಭವಾದುದಲ್ಲ. ಒಬ್ಬನಿಂದ ಮುಕ್ತಾಯವಾಗುವುದೂ ಅಲ್ಲ. ಇದು ಅನೇಕ ವ್ಯಕ್ತಿಗಳ ನಡುವೆ ಹಾಗೂ ತಲೆಮಾರುಗಳಲ್ಲಿ ಹರಡಿಕೊಳ್ಳುವಂಥದು. ಸಂಪ್ರದಾಯವೊಂದು ಜೀವಂತವಾಗಿರುವ ತನಕ ಇದಕ್ಕೆ ನಾಶವಿಲ್ಲ. ಜನಪದ ಗೀತೆ ಏಕಾಗಿ ಅನಾಮಧೇಯ ಮತ್ತು ಅದಕ್ಕೆ ನಿಜವಾದ ಜನ್ಮದಾತೃ ಏಕೆ ಇಲ್ಲ ಎಂಬುದಕ್ಕೆ ಇದು ಕಾರಣವನ್ನು ತಿಳಿಸುತ್ತದೆ.
ಜನಪದ ಗೀತೆಗಳನ್ನು ಅವುಗಳಲ್ಲಿನ ವಸ್ತು ಮತ್ತು ಭಾವಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಕಾರಗಳಾಗಿ ಗುರುತಿಸಬಹುದು. ಸಮಯ, ಸಂದರ್ಭ ಕಟ್ಟುಕಟ್ಟಳೆ ಮುಂತಾದವುಗಳಿಗೆ ಸೀಮಿತವಾದ ವಿಶೇಷ ಜನಪದ ಗೀತೆಗಳು ಇರುತ್ತವೆ. ಕೆಲವು ವರ್ಗಗಳು ವಯಸ್ಸನ್ನು ಅನುಸರಿಸಬಹುದು, ಉದಾಹರಣೆಗೆ, ಮಕ್ಕಳ ಗೀತೆಗಳನ್ನು ವಯಸ್ಕರು ಹಾಡುವುದು ಅಪರೂಪ. ಹೊಸವರ್ಷದ ಆಗಮನವನ್ನು ಸೂಚಿಸಲು ಹಾಡುವ ಕ್ರಿಸ್ಮಸ್ ಕೆರೋಲಿನ ಗೀತೆಗಳನ್ನು ಪ್ರಧಾನವಾಗಿ ಮಕ್ಕಳು ಅಥವಾ ತರುಣರು ಹಾಡುತ್ತಾರೆ. ಇದೊಂದು ಸಂಪ್ರದಾಯ ಅಲ್ಲಿ. ಪ್ರೇಮಗೀತಗಳನ್ನು ಮುದುಕರು ಹಾಡುವುದು ಉಚಿತವಾಗಲಾರದು. ಸೋಬಾನೆಯಂಥ ಸಾಮಾಜಿಕ ಪದ್ಧತಿಯ ಹಾಡುಗಳು ಹೆಂಗಸರಿಗಷ್ಟೇ ಮೀಸಲು. ಈ ರೀತಿ ಹೆಂಗಸರಿಗೆ ಮಾತ್ರ ಮೀಸಲಾದ ಹಾಡುಗಳು ಎಲ್ಲ ಸಮಾಜಗಳಲ್ಲಿಯೂ ಕಾಣಬರುತ್ತವೆ. ಇದು ನಮ್ಮಲ್ಲಿರುವಂತೆ ಬಾಲ್ಟಿಕ್ ರಾಜ್ಯಗಳಲ್ಲಿಯೂ ಇದೆ. ಆಫ್ರಿಕ ಮತ್ತು ಆಸ್ಟ್ರೇಲಿಯ ಮೂಲನಿವಾಸಿಗಳಲ್ಲಿಯೂ ಇದೆ. ಒಟ್ಟಿನಲ್ಲಿ ಹೆಂಗಸರು ಹಾಡುವ ಗೀತೆಗಳನ್ನು ಹೆಂಗಸರ ಹಾಡುಗಳೆಂದೂ ಗಂಡಸರು ಹಾಡುವ ಗೀತೆಗಳನ್ನು ಗಂಡಸರ ಹಾಡುಗಳೆಂದೂ ಕರೆಯಬಹುದೆಂದು ತೋರುತ್ತದೆ.

ಜನಪದ ಗೀತೆಯನ್ನು ವ್ಯಕ್ತಿಜೀವನದ ಬಾಲ್ಯ, ಯೌವ್ವನ, ಮದುವೆ, ಮುಪ್ಪು, ಸಾವು ಮೊದಲಾದ ಪ್ರಮುಖ ಕಾಲಗಳಲ್ಲಿ ಮತ್ತು ಗುಂಪಿನ ಅನೇಕ ಪ್ರಮುಖ ಚಟುವಟಿಕೆಗಳ ಭಾಗವಾಗಿ ಹಾಡಲಾಗುತ್ತದೆ. ಹೀಗೆ ಜೀವನದ ವಿವಿಧ ಘಟ್ಟಗಳಿಗೆ ಸಂಬಂಧಿಸಿದ ಹಾಡುಗಳ ಅನೇಕವಾಗಿ ದೊರೆಯುತ್ತವೆ. ಜನಪದ ಗೀತೆ ಕಾಣುವಲ್ಲೆಲ್ಲ ಕಾಣುವುದು ಮಕ್ಕಳಿಗೆ ಸಂಬಂಧಿಸಿದ ಹಾಡುಗಳು. ತಾಯಿ ತೊಟ್ಟಿಲು ತೂಗುವಾಗ ಇವನ್ನು ಹಾಡುವುದರಿಂದ, ಇವನ್ನು ಜೋಗುಳಗಳು ಅಥವಾ ತೊಟ್ಟಿಲಹಾಡುಗಳೆಂದು ಕರೆಯಲಾಗುತ್ತದೆ. ಇಂಥ ಗೀತೆಗಳ ಸ್ವಾಭಾವಿಕವಾಗಿಯೇ ಕೋಮಲಭಾವಗಳನ್ನು ಹೊಂದಿರುತ್ತವೆ. ಇವು ಮಕ್ಕಳ ಹಾಗೆಯೇ ಮುಗ್ಧವಾದವು, ನಿರ್ಮಲವಾದವು. ಅನೇಕ ವೇಳೆ ಇವು ಮಗುವಿನ ಮನೋಭಾವಗಳನ್ನು ತೆರೆಯುವುದಲ್ಲದೆ, ಮಗುವಿನ ಕಲ್ಪನೆಗೆ ಹತ್ತಿರವಾದ ಸರಳ ಕಥಾನಕಗಳನ್ನೂ ಚಿತ್ರಿಸುತ್ತವೆ. ಇವು ಬಹುಮಟ್ಟಿಗೆ ಸಂತೋಷಕರವಾದ ತರ್ಕಬದ್ಧವಲ್ಲದ ಘಟನೆಗಳಾಗಿರುತ್ತವೆ. ಹೀಗೆ ಮಗುವನ್ನು ಕನಸಿನ ಮತ್ತು ಭ್ರಾಮಕ ಮಾಂತ್ರಿಕ ಜಗತ್ತೊಂದಕ್ಕೆ ಕೊಂಡೊಯ್ಯುತ್ತವೆ. ತೊಟ್ಟಿಲ ಹಾಡುಗಳು ಬಹುತೇಕವಾಗಿ ಭಾವಗೀತಾತ್ಮಕವಾದ ಉತ್ಸಾಹಪೂರ್ಣವೂ ಉತ್ಪ್ರೇಕ್ಷಿತವೂ ಆದ ಕವಿತೆಗಳು.

ಜನಪದ ಗೀತೆಗಳಲ್ಲಿ ಪ್ರಕೃತಿ ಗೀತೆಗಳದೂ ಒಂದು ಭಾಗ. ಜನಪದರು ಬಡತನದಲ್ಲಿ ಅದ್ದಿಹೋದವರು. ಆದರೆ ಅವರ ಗೀತೆಗಳಲ್ಲಿ ಈ ಯಾವುದೇ ಕಹಿ ಕಂಡುಬರುವುದಿಲ್ಲ. ಭೂಮಿತಾಯಿಯ ಮಕ್ಕಳಾದ ಇವರ ಜೀವನ ಆಕೆಯ ಅನುಗ್ರಹದ ಮೇಲೆ ನಿಂತಿರುವಂಥದು. ಇದು ಹಲವು ಗೀತೆಗಳ ಹುಟ್ಟಿಗೆ ಕಾರಣವಾಗಿದೆ. ಇಲ್ಲಿಯ ಗೀತೆಗಳು ಪ್ರಕೃತಿಯನ್ನು ನಿಕಟವಾಗಿ ಪರಿಚಯಿಸುತ್ತಿದ್ದು, ಇವುಗಳಲ್ಲಿನ ಭಾವನೆಗಳಿಗೆ ಪ್ರಕೃತಿಯೇ ಕಾರಣವಾಗಿದೆ. ಪ್ರಣಯಗೀತೆಗಳಲ್ಲಿ ಭಾವಾತ್ಮಕಸ್ಫೂರ್ತಿಯನ್ನು ಒದಗಿಸುವುದಕ್ಕೆ ಕೂಡ ಪ್ರಕೃತಿ ಸಹಾಯ ಮಾಡುತ್ತದೆ.

ರೈತರು ಋತುಮಾನಗಳ ವ್ಯತ್ಯಾಸಗಳನ್ನು ಭಯಚಕಿತರಾಗಿ ಕಾಯುತ್ತಿದ್ದು ಅವನ್ನು ನೃತ್ಯ ಮತ್ತು ಗೀತೆಗಳಿಂದ ಆಚರಿಸುತ್ತಾರೆ. ಈ ಎಲ್ಲ ಪ್ರಕೃತಿ ಹಬ್ಬಗಳೂ ಭೂಮಿಯ ಫಲಶಕ್ತಿ ಆಶಯವನ್ನು ಹೊಂದಿರುತ್ತವೆ. ಮಳೆಗಳ ಫಲಶಕ್ತಿ ಆಶಯ ಮಾನವಾನುಭವದಲ್ಲಿ ಸಂಕೇತವಾಗಿ ಉಪಯೋಗವಾಗಿರುವುದನ್ನು ಹಲವಾರು ಗೀತೆಗಳಲ್ಲಿ ನೋಡುತ್ತೇವೆ. ಕೆಲವಲ್ಲಿ ಸುಗ್ಗಿದೇವತೆಯ ಕಲ್ಪನೆಯಿದ್ದು, ಸಮೃದ್ಧ ಬೆಳೆಗೆ ಅವನ ಅನುಗ್ರಹ ಅಗತ್ಯವಿರುತ್ತದೆ.

ಋತುಗಳನ್ನು ಅನೇಕ ರೀತಿಗಳಲ್ಲಿ ಆಚರಿಸಲಾಗುತ್ತದೆ. ಪ್ರತಿಯೊಂದು ಋತುವೂ ಜನಪದದ ಮನಸ್ಸಿನ ಮೇಲೆ ತನ್ನದೇ ಆದ ಪ್ರಭಾವವನ್ನು ಒತ್ತುವುದಲ್ಲದೆ. ಪ್ರಕೃತಿಯ ಋತುಗೀತೆಗಳ ಉಗಮಕ್ಕೆ ಕಾರಣವಾಗುತ್ತದೆ. ಇಂಥ ಕೆಲವು ಗೀತೆಗಳಲ್ಲಿ ಪ್ರಣಯ ವಸ್ತುವಾಗಿರುತ್ತದೆ, ಕೆಲವೆಡೆ ಎರಡು ಬಗೆಯ ಋತುಗೀತೆಗಳನ್ನು ಕಾಣುತ್ತೇವೆ : ಚೈತ್ರದಲ್ಲಿ ಹಾಡುವಂಥವು ಮತ್ತು ಮಳೆಗಾಲದಲ್ಲಿ ಹಾಡುವಂಥವು. ಮಳೆಗೀತೆಗಳು ಅನೇಕವೇಳೆ ಪ್ರಣಯ ಮತ್ತು ಲೈಂಗಿಕ ವಿಷಯವನ್ನು ವಸ್ತುವಾಗಿ ಹೊಂದಿರುತ್ತವೆ. ಜನಪದರು ಮೋಡ ಮತ್ತು ಮಳೆಗಳನ್ನು ಪ್ರಣಯ ಕ್ರಿಯೆಯ ಸಾಂಪ್ರದಾಯಿಕ ಸಂಕೇತಗಳಾಗಿ ಸಾಮಾನ್ಯವಾಗಿ ನಂಬಿರುತ್ತಾರೆ. ಮಳೆ ಮತ್ತು ಬಿರುಗಾಳಿಯ ಸಂಕೇತ ಲೈಂಗಿಕ ಹಂಬಲವನ್ನು ಉದ್ದೀಪಿಸುವುದಾಗಿರುತ್ತದೆ. ನದಿ ತನ್ನೆಲ್ಲ ದೃಶ್ಯಪರಂಪರೆಯಿಂದ ರಮಣೀಯ ಹಾಗೂ ರಂಜನೀಯ ಗೀತೆಗಳ ಸಮೃದ್ಧ ನಿಧಿಗೆ ಸ್ಫೂರ್ತಿಶಕ್ತಿಯಾಗಿದೆ. ಹಾಗೆಯೇ ಹಕ್ಕಿಗಳು, ಹೂಗಳು, ಹಿಮ, ಬೆಟ್ಟ, ಹುಲಿ ಮೊದಲಾದವು ಗೀತೆಗಳಿಗೆ ವಸ್ತುವನ್ನು ನೀಡಿದೆ.

ಪ್ರಣಯಕ್ಕೆ ಸಂಬಂಧಿಸಿದ ಮತ್ತು ಮದುವೆ ಮುಂತಾದ ಸಾಮಾಜಿಕ ಪದ್ಧತಿಗಳಿಗೆ ಸಂಬಂಧಿಸಿದ ಹಾಡುಗಳು ಅನೇಕವಿದೆ. ಜನಪದ ಗೀತೆಗಳಲ್ಲಿ ಪ್ರಣಯವಂತೂ ಪ್ರಧಾನ ವಸ್ತುವಾಗಿ ಸಂಯೋಜಿತವಾಗಿದೆ. ಜನಪದ ಮನಸ್ಸು ಪ್ರಕೃತಿಯ ಶಾಂತ ಸಂಪರ್ಕದಿಂದ ಪೋಷಿತವಾಗಿರುತ್ತದೆ ಮತ್ತು ಅನುಭವ ಅದರಿಂದ ಬೆಳೆದಿರುತ್ತದೆ. ಕ್ರಿಯೆಯನ್ನು ಪ್ರಕೃತಿಯ ವಸ್ತುಗಳೊಡನೆ ಹೋಲಿಸಲಾಗುತ್ತದೆ. ಅನೇಕವೇಳೆ ಮನಶ್ಯಾಸ್ತ್ರೀಯ ಅನುರೂಪತೆ ಇದಾಗಿರುತ್ತದೆ.

ಭಾರತೀಯ ಜನಪದಕಾವ್ಯದಲ್ಲಿ ಬಾಲೆಯೊಬ್ಬಳನ್ನು ಹಲವುಸಾರಿ ಎಳೆಯ ಬಿದಿರಿಗೆ ಹೋಲಿಸಲಾಗುತ್ತದೆ. ಬಾಳೆಯ ಗಿಡ ಎರಡನೆಯದಾಗುತ್ತದೆ. ಪಕ್ಷಿಗಳು ಪ್ರತಿಮೆಗಳಾಗಿ ಕಾಣಿಸಿಕೊಳ್ಳುವುದಲ್ಲದೆ. ನಂಬಿಕೆಯ ಸಾಕಾರರೂಪಗಳಾಗಿ ಪರಿಗಣಿತವಾಗುತ್ತವೆ. ಅನೇಕಸಾರಿ ಇವು ಪ್ರಣಯ ರಾಯಭಾರಿಗಳಾಗಿ ಕಾರ್ಯ ನಿರ್ವಹಿಸುತ್ತವೆ. ಸಂಸ್ಕøತದ ಪುರಾಣ-ಪ್ರಣಯ ಕಾವ್ಯಗಳಲ್ಲಿ ಹಂಸ ಗೌರವಸ್ಥಾನಗಳಿಸಿದರೆ, ಜನಪದ ಕಾವ್ಯದಲ್ಲಿ ಗಿಳಿ ಅಂಥ ಸ್ಥಾನವನ್ನು ಪಡೆದುಕೊಳ್ಳುತ್ತದೆ. ವ್ಯಾಪಕವಾಗಿ ಬಳಸಲಾಗಿರುವ ಇನ್ನೊಂದು ಪ್ರತಿಮೆಯೆಂದರೆ ದುಂಬಿಯದು. ಜನಪದ ಕಾವ್ಯದಲ್ಲಿ ದುಂಬಿ ಪ್ರಿಯತಮನಾದರೆ, ಮಧು ಪ್ರಿಯತಮೆಯಾಗಿ ಕಾಣಿಸಿಕೊಳ್ಳುತ್ತವೆ. ಪ್ರಣಯದಲ್ಲಿ ಸಂಗೀತ ಪ್ರಧಾನ ಪಾತ್ರಹಿಸುತ್ತದೆ. ಡೋಲು, ನಗಾರಿ, ಕಹಳೆ, ಕೊಳಲು ಮುಂತಾದ ವಾದ್ಯಗಳಿಂದ ಕೂಡಿದ ಸಂಗೀತವನ್ನಿಲ್ಲಿ ಕಾಣಬಹುದು. ಪ್ರಣಯವೆಂದರೆ ಸಮಾಗಮದ ಇಚ್ಛೆಯೇ ಆಗಿದೆ. ಗ್ರಾಮೀಣರು ಸಾಮಾನ್ಯವಾಗಿ ಕೆಲವು ಸಂದರ್ಶನ ಸ್ಥಳಗಳನ್ನು ಸೂಚಿಸುತ್ತಾರೆ: ಬತ್ತದ ಗದ್ದೆಗಳು, ಕಾಡುಪ್ರದೇಶಗಳು, ಹುಲ್ಲುಮಾಳಗಳು, ನದೀದಡಗಳು, ಬಾವಿ ಅಥವಾ ಕೊಳಗಳ ಪಕ್ಕಗಳು.

ಜನಪದ ಗೀತೆಗಳು ಭಗ್ನಪ್ರಣಯಕ್ಕೆ ಉಜ್ಜ್ವಲವಾದ ಮತ್ತು ವರ್ಣರಂಜಿತವಾದ ಅಭಿವ್ಯಕ್ತಿಯನ್ನು ನೀಡಿವೆ. ಕಾವ್ಯ ಎನ್ನುವುದು ಹೃದಯದ ತುಂಬು ಅಭಿವ್ಯಕ್ತಿ ಎಂದು ಹೇಳುವುದಾರೆ, ಅದನ್ನು ಇಂಥ ಗೀತೆಗಳಲ್ಲಿ ನಿಶ್ಚಯವಾಗಿಯೂ ಕಾಣುತ್ತೇವೆ. ಪ್ರಣಯಿಗಳ ರಹಸ್ಯಭೇಟಿ ಮತ್ತು ಪಲಾಯನಕ್ಕೆ ಸಂಬಂಧಿಸಿದ ಗೀತೆಗಳು ಕೂಡ ಸಮೃದ್ಧವಾಗಿ ದೊರೆಯುತ್ತವೆ. ಪ್ರಣಯ ಕೆಲವು ವೇಳೆ ಸಾಮಾಜಿಕ ಆದೇಶಗಳನ್ನು ನಿರಾಕರಿಸುವುದುಂಟು. ಜನಪದ ಗೀತೆಗಳು ಭಾರತದ ಭಿನ್ನ ಸಾಮಾಜಿಕ ರಚನೆಯ ಮೇಲೆ ಬೆಳಕು ಚೆಲ್ಲುವುದು ಅಪರೂಪ. ಈ ಸಾಮಾಜಿಕ ರಚನೆಯಲ್ಲಿ ಕೆಲವು ಮುಕ್ತವಾದವುಗಳು, ಸ್ವಚ್ಛಂದವಾದವುಗಳು, ಉಳಿದವು ನಿಷಿದ್ಧತೆಗಳಿಂದ ಕೂಡಿದವು.

ಮದುವೆಯ ಹಾಡುಗಳು ಹೆಂಗಸರು ಹಾಡಬಲ್ಲ ವಿಶೇಷ ಬಗೆಯ ಭಾವಗೀತೆಗಳಾಗಿವೆ. ವಿವಾಹದ ವಿವಿಧ ಆಚರಣೆಗಳಿಗೆ ಸಂಬಂಧಿಸಿದಂತೆ ಈ ಹಾಡುಗಳಿರುತ್ತವೆ. ದಾಂಪತ್ಯ ಜೀವನದ ಹಾಡುಗಳೂ ಇಲ್ಲೇ ಬರುತ್ತವೆ. ವಿವಾಹದ ತರುವಾಯ ಹೊಸ ಜೀವನ ಆರಂಭವಾಗುತ್ತದೆ. ಈ ಸಂತೋಷವನ್ನು ಅಭಿವ್ಯಕ್ತಿಸುವ ಮತ್ತು ಎರಡು ಯುವ ಚೇತನಗಳು ಒಂದಾಗುವಲ್ಲಿನ ಸಂವೇದನೆಯನ್ನು ಪ್ರಕಟಿಸುವ ಗೀತೆಗಳು ವಿಶೇಷವಾಗಿ ರಂಜಿಸುತ್ತವೆ. ಇದು ಹೀಗೆಯೇ ಇರದೆ, ಅನೇಕ ಸಮಸ್ಯೆಗಳು ಅವರ ಬದುಕನ್ನು ಆವರಿಸುತ್ತವೆ. ಇದು ಬಹಳ ಸಾರಿ ಅರ್ಥಿಕ ಸ್ಥಿತಿಗೆ ಸಂಬಂಧಿಸಿದುದಾಗಿರುತ್ತದೆ. ಜನಪದ ಗೀತೆಗಳಲ್ಲಿ ಇದರ ಸಮರ್ಥ ಅಭಿವ್ಯಕ್ತಿಯನ್ನು ಕಾಣುತ್ತೇವೆ.

ಈ ಹಾಡುಗಳು ಸಾಮಾನ್ಯವಾಗಿ ಹೆಂಗಸರ ಹಾಡುಗಳೆಂದೇ ಪ್ರಸಿದ್ಧವಾಗಿವೆ. ಏಕೆಂದರೆ, ಇವು ಸ್ತ್ರೀಹೃದಯವನ್ನು ಕುರಿತವಾಗಿವೆ. ಇವುಗಳಲ್ಲಿ ಕೆಲವು ಅಪರಿಚಿತ ಮನೆಯ ವಾತಾವರಣದಲ್ಲಿ ಇರುವ ಹೆಣ್ಣಿನ ಭಾವಾತ್ಮಕ ಪ್ರತಿಕ್ರಿಯೆಯನ್ನು ಕುರಿತಿರುತ್ತವೆ; ಇನ್ನು ಕೆಲವು ಅವಳ ದಿವ್ಯಯಾತನೆಗಳಿಗೆ ಮೂಕಸಾಕ್ಷಿಗಳಾಗುತ್ತವೆ. ಇವುಗಳ ಜೊತೆಗೆ, ಸಹಾನುಭೂತಿಪರರಲ್ಲದ ಅತ್ತೆಮಾವಂದಿರು, ಮೂದಲಿಸುವ ನಾದಿನಿಯರು, ಅವಿಭಕ್ತ ಕುಟುಂಬದ ರಚನೆ, ವ್ಯಾವಹಾರಿಕ ಆರ್ಥಿಕವ್ಯವಸ್ಥೆ ಮೊದಲಾದವು ಅವಳ ಬಾಳನ್ನು ಮತ್ತಷ್ಟು ತೊಡಕುಗೊಳಿಸುತ್ತವೆ. ಹೆಣ್ಣು ತನಗೆ ಸಮೀಪರಾದ ನೆಂಟರಿಷ್ಟರನ್ನು ಅಪೇಕ್ಷಿಸುವ ಮತ್ತು ಅದರಲ್ಲಿಯೂ ತಾನು ಅಗಲಿ ಬಂದ ತೌರಿನ ಕಲ್ಪನೆಯನ್ನು ಕುರಿತಾಗಿ ಚಿಂತಿಸುವ ಗೀತೆಗಳೂ ಗೋಚರಿಸುತ್ತವೆ. ವೈಯಕ್ತಿಕ ಭಾವನೆಗಳ ರಚನೆಗಳಿವು. ಇವು ತಮ್ಮ ನಾದ ಮತ್ತು ಲಯಗಳಲ್ಲಿ ವ್ಯಥೆಯೊಂದನ್ನು ಹೊತ್ತಿರುತ್ತವೆ. ಇಂಥ ಕೆಲವು ಗೀತೆಗಳು ಕೆಲವೊಂದು ಮಟ್ಟದ ಕ್ರೋಧ ಮತ್ತು ಪ್ರತಿಭಟನೆಯನ್ನೂ ವ್ಯಕ್ತಪಡಿಸುವಂತೆ ತೋರುತ್ತವೆ.

ಕೆಲವು ಮದುವೆ ಹಾಡುಗಳು ಪೌರಾಣಿಕ ಹಿನ್ನೆಲೆಯನ್ನು ಹೇಳುತ್ತವೆ. ಇವು ನೇರವಾಗಿ ಅಥವಾ ಪರೋಕ್ಷವಾಗಿ ಪುರಾಣ ಮಹಾಕಾವ್ಯಗಳ ಐತಿಹ್ಯಗಳನ್ನು ನಿರ್ದೇಶಿಸುತ್ತವೆ; ಉದಾಹರಣೆಗೆ: ಹರ-ಗೌರಿ, ರಾಮ-ಸೀತಾ, ಕೃಷ್ಣ-ರುಕ್ಮಿಣಿ ಇತ್ಯಾದಿ. ಗಂಡನ್ನೂ ಗಂಡಿನ ಕಡೆಯವರನ್ನೂ ಹೆಣ್ಣಿನ ಕಡೆಯವರು ಜರಿಯುವ ಹಾಗೆಯೇ ಹೆಣ್ಣನ್ನೂ ಹೆಣ್ಣಿನ ಕಡೆಯವರನ್ನೂ ಗಂಡಿನ ಕಡೆಯವರು ಜರಿಯುವ ಗೀತೆಗಳು ಎಲ್ಲ ಕಡೆಯಲ್ಲೂ ಸಿಗುತ್ತವೆ. ಈ ಮುಯ್ಯಿ ಪದ್ಧತಿ ನಮ್ಮಲ್ಲಿ ಹೇಗೋ ಹಾಗೆಯೇ ಯೂರೋಪಿನಲ್ಲಿಯೂ ಜೀವಂತವಾಗಿದೆ.

ಜನಪದ ಗೀತೆಗಳಲ್ಲಿ ಜೀವನದ ಸಾಮಾಜಿಕ ಆರ್ಥಿಕ ವಿಷಯಗಳು ಕೂಡ ತಮ್ಮದೇ ಆದ ಅಭಿವ್ಯಕ್ತಿಯನ್ನು ಪಡೆದಿವೆ. ಇವುಗಳಲ್ಲಿ ಕೆಲವು ಸಮಾಜದಲ್ಲಿನ ಉತ್ಪನ್ನಕಾರಕ ಸಂಬಂಧಗಳು ಮತ್ತು ಉತ್ಪನ್ನೋಪಕರಣಗಳನ್ನು ಕುರಿತು ಹಾಡುತ್ತವೆ. ಬಹುತೇಕ ಜನಪದ ಕಥೆಗಳು ದುಡಿಮೆಯೊಡನೆ ಹುಟ್ಟಿ ಬೆಳೆದವು. ಸ್ವಾಭಾವಿಕವಾಗಿಯೆ ಈ ಗೀತೆಗಳು ಜನತೆಯ ಸಾಮಾಜಿಕ, ಆರ್ಥಿಕ ಜೀವನದ ಮೇಲೆ ಬೆಳಕು ಚೆಲ್ಲುತ್ತವೆ.

ಜನಪದರ ಮುಖ್ಯ ಕಸಬು ಬೇಸಾಯ. ಇದನ್ನು ಬಿಟ್ಟು ಉಳಿದ ಕಸಬುಗಳು ಸಹಾಯಕ ಪ್ರವೃತ್ತಿಯವು. ವಿಶಾಲವಾಗಿ ಹೇಳುವುದಾದರೆ, ಈ ಹಾಡುಗಳು ವ್ಯವಸಾಯ ಮಾದರಿಯ ಆರ್ಥಿಕ ವ್ಯವಸ್ಥೆಗೆ ಹೊಂದಿಕೆಯಾದವುಗಳಾಗಿವೆ. ಇದರ ಸುತ್ತ ವೈವಿಧ್ಯಮಯ, ಸಮೃದ್ಧ ಗೀತಸಾಹಿತ್ಯ ಹುಟ್ಟಿಕೊಂಡಿದೆ-ಬತ್ತದ ಗದ್ದೆಯ ಹಾಡುಗಳು ದನಕಾಯುವವರ ಹಾಡುಗಳು, ಮೀನುಗಾರರ ಹಾಡುಗಳು, ಅಂಬಿಗರ ಹಾಡುಗಳು, ಮೇದರ ಹಾಡುಗಳು, ಕಮ್ಮಾರರ ಹಾಡುಗಳು, ಇತ್ಯಾದಿ. ಈ ಎಲ್ಲ ಹಾಡುಗಳ ಪ್ರಧಾನ ತಂತು ಹಳ್ಳಿಯ ವ್ಯವಸಾಯ ಮೂಲ ಆರ್ಥಿಕ ವ್ಯವಸ್ಥೆಯೇ ಆಗಿದೆ.

ಸುಗ್ಗಿ ಚೆನ್ನಾಗಿ ಬರಬೇಕಾದರೆ ಪ್ರಕೃತಿಯ ಅನುಗ್ರಹ ಬೇಕಾಗುತ್ತದೆ. ಆದರೆ ಪ್ರಕೃತಿ ಎಲ್ಲ ಕಾಲದಲ್ಲೂ ಹೀಗೆ ಇರುತ್ತದೆಂದು ಹೇಳಲಾಗುವುದಿಲ್ಲ. ಕೆಲವೊಮ್ಮೆ ಬೇಸಾಯವನ್ನು ಹಾಳುಮಾಡುವಂಥ ಪರಿಸ್ಥಿತಿ ಒದಗಬಹುದು. ಇದನ್ನು ಜನ ತಮ್ಮ ಹಾಡುಗಳಲ್ಲಿ ತೋಡಿಕೊಂಡಿದ್ದಾರೆ. ಹಾಗೆ ಹಾಡುವಾಗ ತಮ್ಮ ಹೃದಯ ಮನಸ್ಸುಗಳೆರಡನ್ನೂ ಅದರಲ್ಲಿ ವ್ಯಕ್ತಪಡಿಸಿದ್ದಾರೆ. ವಾಸ್ತವವಾಗಿ, ಹಾಡುಗಳು ಅವರಿಗೆ ಆಸರೆಯಾಗಿ ಶ್ರಮದ ಉಪಶಮನಕ್ಕೆ ಕಾರಣಗಳಾಗಿ ಅವರನ್ನು ಉಳಿಸಿವೆ.

ಸಾಮಾನ್ಯವಾಗಿ ಕೆಲಸದ ಹಾಡುಗಳನ್ನು ಮೇಳಗೀತೆಗಳೆಂದು ಕರೆಯಬಹುದು. ಮೇಳದಲ್ಲಿ ಮುಮ್ಮೇಳ ಮತ್ತು ಹಿಮ್ಮೇಳ ಎರಡೂ ಉಂಟು. ಸಮೂಹದಲ್ಲಿ ಯಾರಾದರೊಬ್ಬರು ಹಾಡಿನ ಪ್ರಧಾನಭಾಗವನ್ನು ಹಾಡಿದರೆ, ಉಳಿದವರು ಅದಕ್ಕೆ ಸೊಲ್ಲು ಕೊಡುತ್ತಾರೆ. ಈ ಕ್ರಮದಲ್ಲಿ ಇಡೀ ಗೀತೆಯೊಂದು ಸಾಗುತ್ತದೆ. ಕೆಲಸದ ಹಾಡುಗಳು ಅವುಗಳ ಕೆಲಸದ ಸಂದರ್ಭದಿಂದ ಇಂದು ಮಾಯವಾಗುತ್ತಿವೆ. ಕೇವಲ ಹಾಡು ಮಾತ್ರವಾಗಿ ಉಳಿದುಕೊಳ್ಳುತ್ತಿವೆ. ನಾಗರಿಕತೆಯಿಂದಾಗಿ ಅದರಲ್ಲಿಯೂ ಕೈಗಾರಿಕೀಕರಣದಿಂದಾಗಿ, ಈ ಬಗೆಯ ಗೀತೆಗಳು ಬಹು ಬೇಗ ಅಳಿಯುತ್ತಿವೆ.

ಇಂಥ ಹಾಡುಗಳನ್ನು ಕೆಲಸದ ಸಂದರ್ಭದಲ್ಲಿ ಹಾಡುವುದು ಹಾಡಿಸುವುದು ಸಂಪ್ರದಾಯವಾಗಿ ಬಂದಿದೆ. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ: ಗೀತೆಗಳನ್ನು ಹಾಡುತ್ತಿದ್ದರೆ ಶ್ರಮ ಗೊತ್ತಾಗದೆ ಕೆಲಸ ಸುಗಮವಾಗಿ ಸಾಗುತ್ತದೆ ಎಂಬುದು ಒಂದು, ಬೆಳೆ ಚೆನ್ನಾಗಿ ಬೆಳೆಯುತ್ತದೆ ಎಂಬ ನಂಬಿಕೆ ಮತ್ತೊಂದು. ಬೇಸಾಯದ ಸಮಯದಲ್ಲಿ ಇವನ್ನು ಹಾಡಿದರೆ ದುಷ್ಟಶಕ್ತಿಗಳಿಂದ ಬೆಳೆ ರಕ್ಷಿತವಾಗುತ್ತದೆ ಎಂಬ ಉತ್ಪನ್ನಕಾರಕ ಮಾಂತ್ರಿಕತೆಯೂ ಇದೆ. ಈ ಬಗೆಯ ಬಹುತೇಕ ಗೀತೆಗಳು ಕ್ರಿಯಾತ್ಮಕಗಳೆಂದು ಹೆಸರಾಗಿದೆ.

ನೃತ್ಯಗೀತೆಗಳೂ ಒಂದು ದೃಷ್ಟಿಯಲ್ಲಿ ಕ್ರಿಯಾತ್ಮಕ ಗೀತೆಗಳ ಸರಹದ್ದಿನಲ್ಲಿ ಬರುತ್ತವೆ. ಇವು ಎರಡೂ ಸಾಮಾನ್ಯಮೂಲಗಳಿಂದ ಬಂದವು : 1 ಸರಳ ನೃತ್ಯಗಳು-ವೃತ್ತಾಕಾರದ ನೃತ್ಯಗಳು. ಇವು ಹೆಚ್ಚು ಹಳೆಯವು. ಇವುಗಳಲ್ಲಿ ಹಲವು ಮತಾಚರಣೆಯ ಅರ್ಥಗಳನ್ನು ಸೂಚಿಸುತ್ತವೆ; ಈಗ ಇವು ಸಾಮಾನ್ಯವಾಗಿ ಮರೆತುಹೋಗಿವೆ. 2 ಇತರ ನೃತ್ಯಗಳು ; ಹಲವುವೇಳೆ ಜಟಿಲವಾದವು. ನಗರ ಪ್ರಭಾವಗಳ ಮೂಲಕ ಬಂದವು. ಇವುಗಳಲ್ಲಿ ಬಹುಪಾಲು ಹಾಡಲ್ಪಡುವುದು ಮನೋರಂಜನೆಗಾಗಿ. 
ಈ ಮೇಲಿನ ವಿಶೇಷವಾದ ಕ್ರಿಯಾತ್ಮಕ ಗೀತೆಗಳಿಗೆ ಪ್ರತಿಯಾಗಿ ಎಲ್ಲ ಪ್ರದೇಶಗಳಲ್ಲಿಯೂ ಶುದ್ಧವಾಗಿ ಮನೋರಂಜನೆಗೆ, ಆನಂದಕ್ಕೆ ಅಥವಾ ಭಾವೋಪಶಯನಕ್ಕೆ ಹಾಡುವ ಗೀತೆಗಳಿರುತ್ತವೆ. ಇವು ಯಾವುವೂ ಸಾಮಾಜಿಕ ಅಥವಾ ಸಾಮೂಹಿಕ ಉದ್ದೇಶಗಳನ್ನು ನಿರ್ವಹಿಸುವುದಿಲ್ಲ. ಸಮೃದ್ಧವೂ ವೈವಿಧ್ಯಪೂರ್ಣವೂ ಆದ ಈ ವಿವಿಧ ಪ್ರಕಾರಗಳನ್ನು ನೋಡಿದಾಗ, ಮನೋರಂಜನೆಗೆ ಉಪಯೋಗವಾಗುವುದಕ್ಕಿಂತ ಹೆಚ್ಚಾಗಿ ಇಂದು ಜನಪದಗೀತೆ ಪ್ರಧಾನವಾಗಿ ಕ್ರಿಯಾತ್ಮಕ ಎಂದು ಹೇಳುವುದು ಕಠಿಣವಾಗುತ್ತದೆ.

ಒಂದಾನೊಂದು ಕಾಲದಲ್ಲಿ ಜನಪದಗೀತೆ ಹೆಚ್ಚು ಕ್ರಿಯಾತ್ಮಕ ಲಕ್ಷಣದಿಂದ ಕೂಡಿತ್ತು. ಈ ಊಹೆಗೆ ಹಲವಾರು ಕಾರಣಗಳಿವೆ. ಕ್ರಿಯಾತ್ಮಕ ಗೀತೆಗಳು ಇತರ ಸಮೂಹಗಳಿಗಿಂತ ಬಹಳ ಸಾರಿ ಸರಳ, ಕಡಿಮೆ ಕಲಾತ್ಮಕ ಹಾಗೂ ವಿಷಯದಲ್ಲಿ ಕಡಿಮೆ ವೈವಿಧ್ಯ ಇರುವಂಥವು. ಪಾಠ ಮತ್ತು ಮಟ್ಟುಗಳಲ್ಲಿಯೂ ಇದೇ ರೀತಿ. ಇವು ನಗರದಿಂದ ಪ್ರಭಾವಿತವಾಗಿರುವುದು ಕಡಿಮೆ. ಜನಪದ ಗೀತೆಯಲ್ಲಿ ಆರ್ಷೇಯ ಬೆಳೆವಣಿಗೆಗಳನ್ನು ಇವು ಪ್ರತಿನಿಧಿಸಬಹುದು. ಇಷ್ಟಾದರೂ ಕ್ರಿಯಾತ್ಮಕ ಮತ್ತು ಕ್ರಿಯಾತ್ಮಕವಲ್ಲದ ಗೀತೆಗಳ ನಡುವಿನ ಪ್ರತ್ಯೇಕತೆಯ ವಿಷಯ ಇನ್ನೂ ಸಂದಿಗ್ಧವಾಗಿಯೇ ಉಳಿದಿವೆ.

ಅನೇಕ ಗೀತಪ್ರಕಾರಗಳು ಮತ್ತು ಅವುಗಳ ವಿವಿಧ ಉಪಯೋಗಗಳು ಜನಪದ ಸಮುದಾಯವೊಂದರ ಜೀವನ ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತವೆಂದು ಹೇಳಬಹುದಾಗಿದೆ. ಜನಪದ ಗೀತೆಯ ವಿಷಯ ಹಾಗೂ ಶೈಲಿ ಇಂದಿನ, ಹಿಂದಿನ ಸಮಾಜದ ಸಾಮಾಜಿಕ ಹಿನ್ನೆಲೆಯನ್ನು ಅಭಿವ್ಯಕ್ತಿಸುತ್ತದೆ ಎಂದು ಹೇಗೆ ಹೇಳಲು ಸಾಧ್ಯ ? ಇದಕ್ಕೆ ಪ್ರಾಚೀನ ಸಿದ್ಧಾಂತಕಾರರು ಮತ್ತು ಸಂಗ್ರಹಕಾರರು ಕೆಲವೊಂದು ಕಲ್ಪನಾತ್ಮಕ ಉತ್ತರಕ್ಕೆ ಅವಕಾಶ ಕೊಟ್ಟಿದ್ದಾರೆ. ಮನುಷ್ಯ ಪ್ರಾಕೃತಿಕ ವಾತಾವರಣಕ್ಕೆ ತೀರ ಹತ್ತಿರವಾಗಿ ಜೀವಿಸುವುದರಿಂದ ಅವನನ್ನು ಹೆಚ್ಚು ಪ್ರಾಕೃತಿಕ ಮನುಷ್ಯ ಎಂದು ಯೋಚಿಸಲಾಗಿದೆ. ಅವನು ಭೂಮಿಗೆ ಅಥವಾ ಮಣ್ಣಿಗೆ ಹತ್ತಿರದವನಾದಂತೆ, ಅವನು ತನ್ನ ಜೀವನವನ್ನು ಗ್ರಹಿಸುವುದರಲ್ಲೂ ಅಂಥದೇ ಸಾಮೀಪ್ಯವನ್ನು ಹೊಂದಿದ್ದನೆಂದು ಹೇಳಲಾಯಿತು. ಇಷ್ಟಾದರೂ ಗೀತೆಗಳಲ್ಲಿ ವ್ಯಕ್ತವಾಗಿರುವ ಸಮೂಹದ ಜೀವನಸಂಬಂಧ ಜಟಿಲವಾಗಿಯೇ ಉಳಿದುಕೊಳ್ಳುತ್ತದೆ.
ಜನಪದಗೀತೆ ಸಂಗೀತ ಕಲೆಯಾಗಿಯೂ ಸಮಾನ ಲಕ್ಷಣವೊಂದನ್ನು ಹೊಂದಿದೆ. ಶಿಷ್ಟ ಸಂಗೀತದಲ್ಲಿ ಇರುವ ಹಾಗೆ, ಇದರ ರೂಪ ಮತ್ತು ವಿಷಯಗಳನ್ನು ನಿಗದಿಗೊಳಿಸಿಲ್ಲ. ಒಂದು ಪ್ರದೇಶದ ತುಂಬ ಹರಡಿದ ಮಟ್ಟುಗಳು ಭಿನ್ನ ಭಿನ್ನ ಸ್ಥಳಗಳಲ್ಲಿನ ಅವುಗಳ ಪಾಠಾಂತರಗಳಲ್ಲಿ ಸಾಕಷ್ಟು ವ್ಯತ್ಯಾಸವನ್ನು ತೋರಿವೆ. ಅನೇಕ ಸಾರಿ ಒಂದೇ ಜನಸಮುದಾಯದ ಹಾಡುಗಾರರ ಮಟ್ಟಿಗೆ ಭಿನ್ನರೂಪವೊಂದನ್ನು ಕೊಡುವುದನ್ನು ಕಾಣಬಹುದು. ಇದಲ್ಲದೆ ಮಟ್ಟು ಬೇರೆ ಬೇರೆ ಪದ್ಯಗಳಿಗೆ ಪುನರಾವರ್ತನೆಗೊಂಡಾಗ, ಉಂಟಾದ ವ್ಯತ್ಯಾಸಗಳು ಗೀತೆಯ ಪಾಠಗಳಲ್ಲಿ ನಿರೀಕ್ಷಿಸ ಬಹುದಾದ ಭಿನ್ನತೆಗಳಿಗಿಂತ ಹೆಚ್ಚಿನವಾಗಿರುತ್ತವೆ. ಜನಪದ ಗಾಯಕರು ಮಟ್ಟೊಂದನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ರೀತಿಯಾಗಿಯೇ ಹಾಡಿದರೂ ಆಶ್ಚರ್ಯಪಡಬೇಕಾದುದಿಲ್ಲ. ಮಟ್ಟಿನ ಹೊಸರೂಪಗಳು ಅಥವಾ ಹೊಸ ಮಟ್ಟುಗಳು ಹಳೆಯ ಮಟ್ಟುಗಳಿಂದ ಕವಲೊಡೆಯಬಹುದು. ಇವು ಮಟ್ಟಿನ ಮೂಲವಸ್ತುವಿನ ಆಧಾರದ ಮೇಲೆ ಆದ ವ್ಯತ್ಯಯಗಳೇ ವಿನಾ ಅನಿರೀಕ್ಷಿತ ಹೊಸ ಬದಲಾವಣೆಗಳಲ್ಲ.
ಜನಪದ ಹಾಡುಗಾರ ಪದ್ಯದಿಂದ ಪದ್ಯಕ್ಕೆ ಪುನರಾವರ್ತನೆಯಾಗುವ ಮಟ್ಟಿನ ವ್ಯತ್ಯಾಸಗಳ ಬಗ್ಗೆ ಅಷ್ಟೇನೂ ಎಚ್ಚರಿಕೆ ವಹಿಸಿದಂತೆ ಕಾಣುವುದಿಲ್ಲ. ಇದು ಲಯ, ಧಾಟಿ ಮತ್ತು ಅದರ ಸ್ವರಭಾರ, ರಚನೆಗಳ ಮೇಲೆ ಕೂಡ ಪ್ರಭಾವ ಬೀರುತ್ತದೆ. ಆದರೆ ಮಟ್ಟಿನ ಮೂಲಮಾದರಿ ಮಾತ್ರ ಅಖಂಡವಾಗಿ ಉಳಿಯುತ್ತದೆ. ಆದ್ದರಿಂದ ಪ್ರಸಿದ್ಧ ಮಟ್ಟುಗಳ ಪ್ರಾದೇಶಿಕ ವ್ಯತ್ಯಯಗಳಲ್ಲಿನ ಬೆಳವಣಿಗೆಯಲ್ಲಿ ನಮ್ಯತೆ ಬಹುಮುಖ್ಯ ವಿಷಯವಾಗುತ್ತದೆ.

ನೆರೆಹೊರೆಯ ಜನರಿಗೆ ಎಲ್ಲಿ ಆತ್ಮೀಯ ಸಂಪರ್ಕ ಏರ್ಪಟ್ಟಿರುತ್ತದೆಯೊ ಅದರಲ್ಲಿಯೂ ವಿಶೇಷವಾಗಿ ಎಲ್ಲಿ ಅವರು ಪರಸ್ಪರ ಸೇರಿಹೋಗಿರುತ್ತಾರೊ ಅಂಥ ಕಡೆಗಳಲ್ಲಿ ಮುಟ್ಟುಗಳ ಪರಸ್ಪರ ವಿನಿಮಯ ಹೆಚ್ಚಾಗಿ ನಡೆದಿರುತ್ತದೆ. ಅಷ್ಟು ಮಾತ್ರವಲ್ಲದೆ. ಮಟ್ಟುಗಳ ಮೂಲಾಧಾರಗಳನ್ನು ಹುಡುಕುವುದು ಕೆಲ ಕಾಲಾನಂತರ ಕಷ್ಟವಾಗುತ್ತದೆ. ಒಂದು ಸಮೂಹದ ಧಾಟಿಯ ಲಕ್ಷಣಗಳು ಇನ್ನೊಂದು ಸಮೂಹದ ಧಾಟಿಯ ಮೇಲೆ ದಾಳಿಮಾಡುವುದರಿಂದ, ಕೆಲವು ಸಮಯಗಳಲ್ಲಿ, ರಾಷ್ಟ್ರೀಯ ಸಮೂಹವೊಂದರ ಜನಪದಗೀತೆಯ ಧಾಟಿಯ ಸಂಗೀತಾತ್ಮಕ ವಿವರಣೆ ಕಷ್ಟವೆನಿಸಿಬಿಡುತ್ತದೆ.

ಜನಪದ ಗೀತೆ ಸಾಮಾನ್ಯವಾಗಿ ಚಿಕ್ಕರೂಪಗಳಲ್ಲಿ ಬಳಕೆಯಲ್ಲಿದೆ. ಪದ್ಯದಲ್ಲಿ ನಿಯಮಿತ ಸಂಖ್ಯೆಯ ಸಾಲುಗಳು ಒಂದು ಘಟಕವಾಗಿ ಕಾಣಿಸುತ್ತಿದ್ದು ಗೀತೆಯ ಉದ್ದಕ್ಕೂ ಅವು ಪುನರಾವರ್ತನೆಗೊಳ್ಳುತ್ತವೆ. ಭಿನ್ನರೂಪಗಳನ್ನು ಗುರುತಿಸುವುದು ಪದ್ಯದಲ್ಲಿನ ಸಾಲುಗಳ ಸಂಖ್ಯೆಯಿಂದ ಮತ್ತು ಪದ್ಯರಚನೆಯ ಮಾದರಿಯನ್ನು ರೂಪಿಸುವ ವಿವಿಧ ಲಕ್ಷಣಗಳಿಂದ-ಎಂದು ಹೇಳಬಹುದು. ಸಾಮಾನ್ಯವಾಗಿ ಮೂರು ಅಥವಾ ನಾಲ್ಕುಸಾಲಿನ ಪದ್ಯಗಳು ಎಲ್ಲ ಕಡೆಯೂ ಪ್ರಚುರವಾಗಿರುವಂತೆ ಕಂಡುಬರುತ್ತದೆ. ಪದ್ಯದ ಮಾದರಿಯೊಂದು ಸಾಲಿನ ರಚನೆಗೆ ಸಂಬಂಧಿಸಿದ ಲಕ್ಷಣಗಳನ್ನು ಹೇಳುವುದಾಗಿರಬಹುದು ಅಥವಾ ಸಾಲಿನ ಎಲ್ಲೆಯನ್ನು ದಾಟಿ ಭಿನ್ನ ಸಾಲುಗಳ ನಡುವೆ ಸಾದೃಶ್ಯ ಮತ್ತು ವೈದೃಶ್ಯವನ್ನು ಸ್ಥಾಪಿಸುವುದಾಗಿರಬಹುದು. ಪದ್ಯದ ಸಾಲಿನ ವ್ಯವಸ್ಥೆ ಎರಡು ಸಾಮಾನ್ಯ ತತ್ತ್ವಗಳನ್ನು ಅನುಸರಿಸುತ್ತದೆ: ಶಿಷ್ಟಕಾವ್ಯದಲ್ಲಿ ಬಹುತೇಕ ನಮಗೆ ಪರಿಚಿತವಿರುವ, ಛಂದೋಬದ್ಧ ನಿಯತಪಾದಗಳಿಂದಾದುದು ಒಂದು, ಪಾದವೊಂದನ್ನು ರೂಪಿಸುವ ಸ್ವರಭಾರ ಅಥವಾ ಮಾತ್ರೆಯ ವೈದೃಶ್ಯಗಳು ಪಾತ್ರ ವಹಿಸುವುದರ ಬದಲು ಅಕ್ಷರಗಳ ನಿರ್ದುಷ್ಟ ಸಂಖ್ಯೆಯಿಂದಾದುದು ಮತ್ತೊಂದು. ಜನಪದ ಗೀತೆಯಲ್ಲಿ ಪಾದವೊಂದು ಬಹಳಷ್ಟು ಅಸ್ಥಿರವಾದದ್ದು; ಅಕ್ಷರಸಂಖ್ಯೆ ಬೇಕಾದ ಹಾಗೆ ಬದಲಾಗಬಹುದಾದದ್ದು. ಕೆಲವು ಭಾಷೆಗಳಲ್ಲಿ ಪಾದವೇ ಮುಖ್ಯವಾಗಿರಬಹುದು, ಇನ್ನು ಕೆಲವು ಭಾಷೆಗಳಲ್ಲಿ ಅಕ್ಷರಗಳೇ ಪ್ರಧಾನವಾಗಿರಬಹುದು. ಇಲ್ಲವೆ, ಇವೆರಡೂ ಒಟ್ಟಿಗೆ ಮುಖ್ಯವೆನಿಸಬಹುದು. ಒಟ್ಟಿನಲ್ಲಿ ಪದ್ಯಗಳನ್ನು ಎರಡು ರೀತಿಯಲ್ಲಿ ವರ್ಗೀಕರಿಸಬಹುದು : ಒಂದು-ಪ್ರತಿ ಸಾಲಿನಲ್ಲಿಯೂ ಒಂದೇ ರೀತಿಯ ಛಂದೋಬದ್ಧ ರಚನೆ ಇರುವಂಥದು. ಎರಡು-ಅದು ಇಲ್ಲದಿರುವಂಥದು.

ಪದ್ಯಗಳಲ್ಲಿ ಸಾಧಿತವಾಗುವ ಸಾದೃಶ್ಯ ಮತ್ತು ವೈದೃಶ್ಯಕಾರ್ಯಗಳು ಪುನರಾವರ್ತನ ಧ್ವನಿಮೌಲ್ಯಗಳಾದ ಪ್ರಾಸ, ಅನುಪ್ರಾಸ, ಧ್ವನಿಸಾಮ್ಯ ಮತ್ತಿತರ ರಚನೆಗಳಿಂದ ಹೆಚ್ಚು ಬಣ್ಣಗಟ್ಟುತ್ತವೆ, ವೈವಿಧ್ಯಪೂರ್ಣವಾಗುತ್ತವೆ. ಈ ಧ್ವನಿಮೌಲ್ಯದ ತತ್ತ್ವ ಸಾಲೊಂದನ್ನು ಅಥವಾ ಪ್ರತಿಪದ್ಯದ ಸಾಲಿನ ಭಾಗವೊಂದನ್ನು ಪುನರಾವರ್ತಿಸುವುದರಲ್ಲಿ ಮತ್ತು ಪಲ್ಲವಿಗಳಲ್ಲಿ ಕೂಡ ಕೆಲಸಮಾಡುತ್ತದೆ. ಪಲ್ಲವಿಗಳು ಸಾಮಾನ್ಯವಾಗಿ ಅರ್ಥರಹಿತ, ಅಲಂಕಾರಿಕ ಅಕ್ಷರಗಳಾಗಿರುತ್ತವೆ ಎಂದು ಗುರುತಿಸಲಾಗಿದೆ. ಪಲ್ಲವಿ ಸಾಲುಗಳು ಅರ್ಥರಹಿತವಾಗಿರುವಾಗ, ಅವು ಗೀತೆಯೊಡನೆ ಕೆಲಮಟ್ಟಿಗೆ ಕೆಲಸಮಾಡುತ್ತವೆಯೆಂದು ಹೇಳಬೇಕಾಗುತ್ತದೆ ಮತ್ತು ಅವನ್ನು ಇತರ ಗೀತೆಗಳಿಗೂ ವರ್ಗಾಯಿಸಬಹುದಾಗಿರುತ್ತದೆ.

ಸಂಗ್ರಹಕಾರರಿಗೆ ಮೇಲಿಂದ ಮೇಲೆ ಗಮನಕ್ಕೆ ಬಂದಿರುವ ಅಂಶವೆಂದರೆ, ಗೀತೆಯ ಭಾಗಗಳನ್ನು ಹಾಡುಗಾರರು ಹಾಡದೆಯೇ ಹೇಳಿಕೊಡುವುದು ಕಷ್ಟವಾದುದು ಮತ್ತು ಹಾಡಲೇಬೇಕಾದುದು. ಸ್ಕಾಟ್ಲೆಂಡಿನ ಉತ್ತರಭಾಗದ ವೃದ್ಧಮಹಿಳೆಯೊಬ್ಬಳ ಲಾವಣಿಗಳನ್ನು ಸಂಗ್ರಹಿಸುವುದಕ್ಕಾಗಿ ಸರ್ ವಾಲ್ಟರ್‍ಸ್ಕಾಟ್ ಹೋದಾಗ ಅವನಿಗೆ ಹೇಳಿದಂತೆ: ಅವು ಇರುವುದು ಹಾಡುವುದಕ್ಕಾಗಿಯೇ ಹೊರತು, ಓದುವುದಕ್ಕಲ್ಲ. ಜನಪದ ಗಾಯಕನಿಗೆ ಕಾವ್ಯ ಮತ್ತು ಮಟ್ಟಿನ ರೂಪ ಒಂದು ಅಖಂಡ ಘಟಕ. ಆದರೆ ನಿರ್ದಿಷ್ಟ ಕಾವ್ಯ ಮತ್ತು ಮಟ್ಟಿನ ಕಟ್ಟು ಒಡೆಯಲಾಗದುದೇನೂ ಅಲ್ಲ. ಒಂದೇ ಕಾವ್ಯವನ್ನು ದೇಶದ ವಿವಿಧ ಭಾಗಗಳಲ್ಲಿ ಅಥವಾ ಒಂದೇ ಪ್ರದೇಶದಲ್ಲಿ ಕೂಡ ಅನೇಕ ವೇಳೆ ಬೇರೆ ಬೇರೆ ಮಟ್ಟುಗಳಿಂದ ಹಾಡುವುದನ್ನು ನೋಡಿದಾಗ, ಗ್ರಂಥಭಾಗವನ್ನು ಅದರ ಮಟ್ಟಿನಿಂದ ಪ್ರತ್ಯೇಕಿಸಿ, ಅದರ ಜಾಗದಲ್ಲಿ ಬೇರೊಂದನ್ನು ಸೇರಿಸಬಹುದೆನಿಸುತ್ತದೆ. ಜನಪದ ಗಾಯಕರು ಗ್ರಂಥಭಾಗವೊಂದನ್ನು ಸೇರಿಸಬಹುದೆನಿಸುತ್ತದೆ. ಜನಪದ ಗಾಯಕರು ಗ್ರಂಥಭಾಗವೊಂದನ್ನು ಸಾಮಾನ್ಯವಾಗಿ ಹಾಡುವ ಮಟ್ಟು ಸ್ಮರಣೆಗೆ ಬಾರದೆ ಹೋದಾಗ ತಮಗೆ ಪ್ರಿಯವಾದ ಮಟ್ಟುಗಳನ್ನು ಸೇರಿಸಿ ಹಾಡಿಬಿಡುವುದುಂಟು. ಗಾಯಕರ ಪ್ರಜ್ಞೆ ಮಟ್ಟಿಗಿಂತ ಹೆಚ್ಚಾಗಿ ಗ್ರಂಥದಲ್ಲಿ ನೆಟ್ಟಿರುತ್ತದೆ. ಮಟ್ಟು ಅಮೂರ್ತವಾದುದೆಂಬುದನ್ನು ಕಲ್ಪಿಸಿಕೊಂಡಾಗ ನಮಗಿದು ಆಶ್ಚರ್ಯವೆನಿಸುವುದಿಲ್ಲ.
ಜನಪದ ಸಂಗೀತದಲ್ಲಿ ಸಂಗೀತವಾದ್ಯಗಳ ಪಾತ್ರ ಅಪ್ರಧಾನವಾದರೂ ಕುತೂಹಲಕಾರಿಯಾದದು. ಇಷ್ಟಾದರೂ ಈ ವಿಷಯ ಗಮನ ಸೆಳೆಯುವುದು ಸ್ವಲ್ಪವೇ. ಬಹುತೇಕ ಜನಪದ ಸಮೂಹಗಳಲ್ಲಿ ಸ್ವತಂತ್ರವಾದ ವಾದ್ಯಸಂಗೀತ ರೂಪಗೊಂಡಿರುವುದು ತೀರ ಕಡಿಮೆ. ಜನಪದ ಗೀತೆಯ ಜೊತೆಯಲ್ಲಿ ವಾದ್ಯಸಂಗೀತವನ್ನು ಉಪಯೋಗಿಸುವುದು ಸಾರ್ವತ್ರಿಕವಾದುದೇನೂ ಇಲ್ಲ. ಹಂಗರಿಯಂಥ ಕೆಲವು ದೇಶಗಳಲ್ಲಿ ಇದು ಗೊತ್ತೇ ಇಲ್ಲ. ಇತರ ಕಡೆಗಳಲ್ಲಿ ಗೀತೆಗಳ ನಿರ್ದಿಷ್ಟ ವರ್ಗಗಳಿಗೆ ಮಾತ್ರ ಬಳಸಲಾಗುತ್ತದೆ. ಒಟ್ಟಾರೆ, ಬಹುತೇಕ ಜನಪದ ಗೀತೆಗಳನ್ನು ಯಾವುದೇ ಪಕ್ಕವಾದ್ಯವಿಲ್ಲದೆ ಹಾಡಲಾಗುತ್ತದೆ.
ಜನಪದ ಗೀತಸಾಹಿತ್ಯದಲ್ಲಿ ಕಥಾತ್ಮಕ ಭಾಗವನ್ನು ಲಾವಣಿ, ಖಂಡಕಾವ್ಯ ಮತ್ತು ಮಹಾಕಾವ್ಯಗಳೆಂದು ವಿಭಜಿಸಿಕೊಳ್ಳಬಹುದು. ಇವು ತಮ್ಮ ರೂಪರಚನೆಯಲ್ಲಿ ಹಲವಾರು ಸಮಾನ ಗುಣಗಳನ್ನು ಹೊಂದಿರುತ್ತವೆ. ಇವುಗಳೆಲ್ಲದರಲ್ಲಿಯೂ ಕ್ರಿಯೆ, ಪಾತ್ರ, ಸಂವಿಧಾನ ಮತ್ತು ವಸ್ತುಗಳೆಂಬ ನಾಲ್ಕು ಸಾಮಾನ್ಯ ಅಂಶಗಳಿರುತ್ತವೆ. ಹಾಡಿನ ಮಧ್ಯೆ ವಚನ ಕಾಣಿಸಿಕೊಳ್ಳುವಿಕೆ, ಪಲ್ಲವಿಗಳ ಪುನರಾವರ್ತನೆ, ಕೆಲವೊಮ್ಮೆ ವಾದ್ಯನರ್ತನಗಳ ಬಳಕೆ ಇತ್ಯಾದಿಗಳಲ್ಲಿಯೂ ವ್ಯತ್ಯಾಸ ಕಾಣಿಸಿಕೊಳ್ಳುವುದಿಲ್ಲ. ಇವು ವಿಂಗಡಿಸಿಕೊಳ್ಳುವುದು ಗಾತ್ರ ಪ್ರಮಾಣದಲ್ಲಿ, ಅದಕ್ಕನುಸಾರಿಯಾದ ಒಳರಚನೆಯಲ್ಲಿ. ಲಾವಣಿ ಏಕ ಘಟನೆಯ ಮೇಲೆ ಆಧರಿತವಾದುದು: ಅನೇಕ ಘಟನಾವಳಿಗಳಿಂದ ಕಥೆ ಸಾಗುವುದಿಲ್ಲ. ಕ್ರಿಯೆ ಶೀಘ್ರಗತಿಯಲ್ಲಿ ಅಂತ್ಯದ ಕಡೆಗೆ ನುಗ್ಗುವುದನ್ನು ಕಾಣಬಹುದು. ಕಥಾವಸ್ತು ಶಿಖರಸ್ಥಿತಿಗೆ ಹೋದಂತೆ ಪ್ರಸ್ವಗೊಳ್ಳುವುದೂ ಇದರ ಒಂದು ಲಕ್ಷಣವಾಗುತ್ತದೆ. ಇದು ಒಬ್ಬನಿಂದ ರಚಿತವಾದುದೆಂದೂ ಮಧ್ಯಯುಗದ ಬೆಳೆವಣಿಗೆಯೆಂದೂ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಸಾಂಸ್ಕøತಿಕವಾಗಿ ಲಾವಣಿ (ನೋಡಿ- ಲಾವಣಿ) ಎಲ್ಲ ಕಡೆಯಲ್ಲಿಯೂ ಮಹಾಕಾವ್ಯದ ತರುವಾಯದ್ದೆಂಬ ಅಭಿಪ್ರಾಯವೂ ಇದೆ.      (ಆರ್.ಜಿ.)